ಪಾರೊಪೊಡ
ಸಂಧಿಪದಿ ವಂಶದ ಮಿರಿಯಾಪೊಡ ವರ್ಗ ಮತ್ತು ಪ್ರೋಗೋನಿಯೇಟ ಉಪವರ್ಗಗಳಿಗೆ ಸೇರಿದ ಗಣ. ಇದಕ್ಕೆ ಸೇರಿದ ಹುಳುಗಳ ಜನನೇಂದ್ರಿಯಗಳು ದೇಹದ ಮುಂತುದಿಯ ಬಳಿ ಹೊರತೆಗೆಯುವುವು. ಈ ಗಣದ ಪ್ರಾಣಿಗಳು ಗಾತ್ರದಲ್ಲಿ ಆತ್ಯಂತ ಚಿಕ್ಕವು; 2 ಮಿಮೀ. ಗಿಂತ ಕಡಿಮೆ ಉದ್ದದವಾಗಿರುವುವು. ಕೊಳೆಯುತ್ತಿರುವ ಸಸ್ಯ ಮತ್ತು ಪ್ರಾಣಿ ಆಹಾರವನ್ನು ಸೇವಿಸಿ ಜೀವಿಸುತ್ತವೆ.  ಇವುಗಳ ದೇಹದ ರುಂಡ ಭಾಗದಲ್ಲಿ ಐದು ಖಂಡಗಳೂ ಮುಂಡ ಭಾಗದಲ್ಲಿ 12 ಖಂಡಗಳೂ ಉಂಟು. 2-10ನೆಯ ಖಂಡಗಳಲ್ಲಿ ಮಾತ್ರ ಕಾಲುಗಳಿವೆ. ಈ ಪ್ರಾಣಿಗಳಲ್ಲಿ ಮೊದಲನೆಯ ಮ್ಯಾಕ್ಸಿಲ ಕೂಡಿಕೊಂಡು ಗ್ನಾತೊಕೈಲೇರಿಯಮ್ ಎಂಬ ರಚನೆ ರೂಪುಗೊಂಡಿದೆ. ಆಂಟೆನ್ನಾಗಳು ಕವಲೊಡೆದಿವೆ. ವದನಾಂಗಗಳಲ್ಲಿ ಸರಳವಾದ ಮತ್ತು ವಿಭಾಗವಾಗದೇ ಇರುವ ಮ್ಯಾಂಡಿಬಲ್‍ಗಳಿವೆ. ಇವುಗಳಲ್ಲಿ ಕಣ್ಣುಗಳಾಗಲೀ, ಹೃದಯವಾಗಲೀ, ಉಸಿರಾಟದ ವಿಶಿಷ್ಟ ಅಂಗಗಳಾಗಲೀ ಇಲ್ಲ. ಇವು ಚರ್ಮದ ಮೂಲಕ ಉಸಿರಾಡುವವು.  ಈ ಗಣದಲ್ಲಿ ಪಾರೊಪಿಡೀ ಮತ್ತು ಯೂರಿಪಾರೊಪಿಡೀ ಎಂಬ ಎರಡು ಕುಟುಂಬಗಳಿವೆ. ಉದಾ: ಪಾರೊಪಸ್ ಹಕ್ಸ್‍ಲಿಯೈ, ಯೂರಿಪಾರೊಪಸ್ ಸ್ಟೈನೋಸಸ್. 					   (ಎಂ.ಎನ್.ಪಿ.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ